ಕೇದಾರನಾಥ

ಉತ್ತರಪ್ರದೇಶದ ಗಢವಾಲ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಶೈವ ಕ್ಷೇತ್ರ. ಕೇದಾರಪುರಿ ಎಂಬ ಹೆಸರೂ ಉಂಟು. ಇದು ಹಿಮಾಲಯ ತಪ್ಪಲಲ್ಲಿ ಸಮುದ್ರ ಮಟ್ಟಕ್ಕೆ 11,760 ಅಡಿ ಎತ್ತರದಲ್ಲಿದೆ. ಇಲ್ಲಿಯ ಕೇದಾರನಾಥೇಶ್ವರನಿಗೆ ಪೂಜೆ ಸಲ್ಲಿಸಲು ಯಾತ್ರಿಕರು ವರ್ಷವರ್ಷವೂ ತಂಡೋಪತಂಡವಾಗಿ ಬರುತ್ತಾರೆ. 

	ಈ ಕ್ಷೇತ್ರ ಕೆಲಕಾಲ ಬೌದ್ಧರ ಒಂದು ಮುಖ್ಯ ಕೇಂದ್ರವಾಗಿತ್ತು. ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ ಬೌದ್ಧರ ಪ್ರಾಬಲ್ಯವನ್ನು ಕುಗ್ಗಿಸಿದರು. ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಇಲ್ಲಿ ಶಂಕರಾಚಾರ್ಯರು ನಿರ್ವಾಣ ಹೊಂದಿದರೆಂಬ ಹೇಳಿಕೆಯೂ ಇದೆ. 

	ಕೇದಾರನಾಥೇಶ್ವರ ದೇವಾಲಯವನ್ನು ಎತ್ತರವಾದ ಸ್ಥಳದಲ್ಲಿ ಕಟ್ಟಲಾಗಿದೆ. ಸುತ್ತ ಹಿಮದಿಂದ ಆವೃತವಾದ ಪರ್ವತ ಶಿಖರಗಳಿವೆ. ಇಲ್ಲಿಯ ಶಿವಲಿಂಗ ಭಾರತದ ದ್ವಾದಶ ಜ್ಯೋರ್ತಿಲಿಂಗಗಳಲ್ಲಿ ಒಂದೆಂದು ಹೆಸರಾಗಿದೆ. ಇದು ಆಕಾರದಲ್ಲಿ ಎಮ್ಮೆಯ ಪೃಷ್ಠದಂತಿದ್ದು ನೋಡಲಿಕ್ಕೆ ಕೈಲಾಸ ಶಿಖರದಂತೆ ಇಲ್ಲವೆ ಧಾನ್ಯದ ಗುಡ್ಡೆಯಂತೆ ಕಾಣುತ್ತದೆ. ಲಿಂಗದ ತಳಭಾಗದ ಪರಿಧಿ 10-12 ಎತ್ತರ 2. ಪಾಂಡವರು ಸ್ವರ್ಗಾರೋಹಣಕ್ಕೆ ಮುಂಚೆ ಇಲ್ಲಿಗೆ ಬಂದು ಶಿವಾಲಯವನ್ನು ಕಟ್ಟಿಸಿ ಶಿವನನ್ನು ಪೂಜಿಸಿ ಪಾಪವಿಮುಕ್ತರಾದರೆಂದು ಪ್ರತೀತಿ. ಇನ್ನೊಂದು ಆಖ್ಯಾಯಿಕೆ ಪ್ರಕಾರ ಭೀಮ ಮತ್ತು ಆತನ ತಮ್ಮಂದಿರು ಪೂಜಾ ಸಮಯದಲ್ಲಿ ಶಿವಲಿಂಗವನ್ನು ಸ್ಪರ್ಶಿಸಿದ್ದರಿಂದ ಶಿವ ಮಹಿಷ ರೂಪದಲ್ಲಿ ಕಾಣಿಸಿಕೊಂಡು ತನ್ನ ಕಾಲು ಮತ್ತು ಕೊಂಬುಗಳಿಂದ ಹಳ್ಳವನ್ನು ತೋಡಿ ನೆಲಕ್ಕೆ ಹೋಗುತ್ತಿದ್ದಾಗ ಭೀಮ ಕಂಡು ತನ್ನೆರಡು ಕೈಗಳಿಂದ ಅದರ ಬೆನ್ನಿನ ಭಾಗವನ್ನು ತಬ್ಬಿಹಿಡಿದನಾದುದರಿಂದ ಅದರ ಪೃಷ್ಠ ಭಾಗ ಕೇದಾರದಲ್ಲಿ ಉಳಿದು ನೇಪಾಳದಲ್ಲಿ ಪಶುಪತಿನಾಥನ ರೂಪದಲ್ಲಿ ಅದರ ಮುಂಭಾಗ ಕಾಣಿಸಿಕೊಂಡಿತಂತೆ. 

	ಗರ್ಭಗುಡಿಯಲ್ಲಿ ಕತ್ತಲಿದ್ದು, ಸದಾ ನಂದಾದೀಪ ಉರಿಯುತ್ತಿರುತ್ತದೆ. ದೇವಾಲಯದ ಆವರಣದಲ್ಲಿ ಪಂಚಪಾಂಡವರು ದ್ರೌಪದಿ, ಕುಂತಿ, ಪಾರ್ವತಿ, ಲಕ್ಷ್ಮಿ ಮುಂತಾದ ವಿಗ್ರಹಗಳಿವೆ. ಇವುಗಳಿಗೂ ನಿತ್ಯ ಪೂಜೆ ನಡೆಯುತ್ತದೆ. ನಿಷಿದ್ಧವಾದ್ದರಿಂದ ಇಲ್ಲಿಯ ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡುವುದಿಲ್ಲ. ಆದರೆ ತುಪ್ಪದ ಉಂಡೆಗಳನ್ನು ಮಾಡಿ ಲಿಂಗದ ಮೇಲೆ ಎಸೆಯುತ್ತಾರೆ. ಶಿವಲಿಂಗದ ಪೀಠದ ಬಳಿ ಪಂಡರು(ಪೂಜಾರಿಗಳು) ಕುಳಿತು ಮಂತ್ರ ಘೋಷಣೆ ಮಾಡಿ ಭಕ್ತಾದಿಗಳು ತಂದ ನೈವೇದ್ಯವನ್ನು ದೇವರಿಗೆ ಅರ್ಪಿಸುತ್ತಾರೆ. ಪೂಜೆ ಮುಗಿದ ಆನಂತರ ಪೂಜೆ ಸಲ್ಲಿಸಿದಾತ ಒಮ್ಮೆ ಶಿವಲಿಂಗವನ್ನು ಆಲಂಗಿಸಿಕೊಳ್ಳುತ್ತಾನೆ. ಇದರಿಂದ ಶಿವ ಸಾನ್ನಿಧ್ಯವನ್ನು ಪಡೆದನೆಂಬ ಸಂತುಷ್ಟಿ ಭಕ್ತನ ಪಾಲಿನದಾಗುತ್ತದೆ. ಈ ಕ್ಷೇತ್ರದಲ್ಲಿ ಮಡಿ, ಮೈಲಿಗೆಗಳ ನಿಯಮಗಳು ಅಷ್ಟಾಗಿ ಇಲ್ಲ. ಪಂಡರೂ ಅಷ್ಟೇ, ತಮ್ಮ ದೈನಂದಿನ ಪೋಷಾಕಿನಲ್ಲೆ ಪೂಜೆ, ಅರ್ಚನೆಗಳನ್ನು ನಡೆಸಿಕೊಡುತ್ತಾರೆ. ಇಲ್ಲಿಯ ಅರ್ಚಕ ನಂಬೂದರಿ ಬ್ರಾಹ್ಮಣ ಮನೆತನಕ್ಕೆ ಸೇರಿದವ.

	ಕೇದಾರನಾಥ ಮಂದಿರದಲ್ಲಿ ಪೂಜಾದಿಗಳು ನಡೆಯುವುದು ವರ್ಷದಲ್ಲಿ 6 ತಿಂಗಳು ಮಾತ್ರ. ಏಪ್ರಿಲ್ ತಿಂಗಳ ಕೊನೆಯ ಭಾಗದಲ್ಲಿ ಶುಭ ನಕ್ಷತ್ರದಲ್ಲಿ ಮಂದಿರದ ಬಾಗಿಲುಗಳನ್ನು ತೆರೆಯುವರು. ಕಾರ್ತೀಕ ಮಾಸದಲ್ಲಿ ಬಾಗಿಲನ್ನು ಮುಚ್ಚುವರು. ಉಳಿದ 6 ತಿಂಗಳು ಕೇದಾರನಾಥೇಶ್ವರನ ಉತ್ಸವ ಮೂರ್ತಿಯನ್ನು 40 ಕಿ.ಮೀ. ಕೆಳಗಿರುವ ಉಷಾಮಠಕ್ಕೆ ತಂದು ಪೂಜಾದಿಗಳನ್ನು ಸಲ್ಲಿಸುವರು. 

	ದೇವಸ್ಥಾನದ ಸುತ್ತ ಪ್ರದಕ್ಷಿಣೆ ಬರುವ ದಾರಿಯಲ್ಲಿ ಎಂಟು ದಿಕ್ಕುಗಳಲ್ಲೂ ಪವಿತ್ರವೆಂದು ಭಾವಿಸಲಾದ ನೀರಿನ ಎಂಟು ಕುಂಡಗಳಿವೆ. ಸಮೀಪದಲ್ಲಿಯೇ ಭೈರವ ಝಾಂಪ್ ಎಂಬ ಬಂಡೆಯಿದೆ. ಈ ಬಂಡೆಯ ಮೇಲಿಂದ ಬಿದ್ದು ಪ್ರಾಣ ತ್ಯಾಗ ಮಾಡಿದರೆ ಮುಂದಿನ ಜನ್ಮದಲ್ಲಿ ಅತೃಪ್ತ ಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಬದರೀ, ಕೇದಾರ, ಮಧ್ಯಮಹೇಶ್ವರ, ತುಂಗನಾಥ, ರುದ್ರನಾಥ ಮತ್ತು ಕಲ್ಲೇಶ್ವರ ಇವು ಇದರ ಸಮೀಪದಲ್ಲಿರುವ ದೇವಸ್ಥಾನಗಳು. ಇವಿಷ್ಟು ಸೇರಿ ಪಂಚ ಕೇದಾರನಾಥ ಎಂಬ ಹೆಸರಾಗಿವೆ.      			
	(ಜಿ.ಎಚ್.)